ದಿನಾಂಕ 26 ಡಿಸೆಂಬರ್ 2010ರ ಸಂಚಿಕೆ...
ಬೊಮ್ಮ ನಿನ್ಗೆ ಜೋಡುಸ್ತೀನಿ ಸಂದ್ರ ಮುಟ್ಟಿದ್ ಕೈನ...
* ಶ್ರೀವತ್ಸ ಜೋಶಿ
ಇದು ಈ ಕ್ಯಾಲೆಂಡರ್ ವರ್ಷದ ಕೊನೆಯ ಭಾನುವಾರ. ಅಂಕಣದ ಸಂಪ್ರದಾಯದಂತೆ ವನ್ ರೌಂಡ್ ಆಫ್ ಸ್ವಾರಸ್ಯಕರ ಸಿಂಹಾವಲೋಕನಕ್ಕೆ ಸುಸಂದರ್ಭ. ಹೊರಗಡೆ ಚಳಿ ಬೇರೆ ಜೋರಾಗಿರುವುದರಿಂದ ಇಂಥ ‘ಕುರ್ಲುಪಚ್ಚಡಿ’ಗೆ ಪ್ರಶಸ್ತ ಕಾಲ (ಕುರ್ಲುಪಚ್ಚಡಿ ಅಂದ್ರೇನಂತ ಗೊತ್ತಿಲ್ಲವಾದರೆ ಉತ್ತರಕರ್ನಾಟಕದ ಮಂದಿ ‘ಗಿರ್ಮಿಟ್’ಅನ್ನೂ, ಹಳೇಮೈಸೂರು ಪ್ರಾಂತ್ಯದವರು ‘ಚುರುಮುರಿ’ಯನ್ನೂ ನೆನಪಿಸಿಕೊಳ್ಳಿ). ಇವತ್ತು ಒಂದಿಷ್ಟು ತಮಾಷೆ ತರ್ಲೆ-ತರ್ಕಗಳ ಲೈಟ್ ಖಾರ, ಸಣ್ಣಪುಟ್ಟ ತಪ್ಪುಒಪ್ಪುಗಳ ಉಪ್ಪು-ಹುಳಿ, ಜೊತೆಗೆ ಓದುಗರ ಓಲೆಗಳ ಸಿಹಿ - ಎಲ್ಲ ಸೇರಿದ ಸಮ್ಮಿಶ್ರಣ. ಒಂಥರದ ಕಾಕ್ಟೈಲು ಅನ್ನಿ ಬೇಕಿದ್ದರೆ.
ಎರಡು ವಾರಗಳ ಹಿಂದೆ ‘ಬಟ್ಟೆ ಒಗೆಯುವ ಕಂಡಾಬಟ್ಟೆ ಸೊಬಗಿನ’ ಹರಟೆಯ ಕೊನೆಯಲ್ಲಿ ಒಂದು ರಸಪ್ರಶ್ನೆ ಕೇಳಿದ್ದೆನಷ್ಟೆ? ಬಿಟಿಎಂ ಲೇಔಟ್ನ ಹೆಸರಿನಲ್ಲಿ ಎಂ ಎಂದರೇನು ಅಂತ. ಆ ಕ್ವಿಜ್ ಒಂದು ದಾಖಲೆಯನ್ನೇ ನಿರ್ಮಿಸಿತು. ಉತ್ತರಿಸಿದವರ ಸಂಖ್ಯೆಯೇ ಒಂದು ದಾಖಲೆಯಾದರೆ ಎಲ್ಲರೂ ‘ಮಡಿವಾಳ’ ಎಂಬ ಸರಿಯುತ್ತರವನ್ನೇ (ಕೆಲವರು ಲೇಖನದಲ್ಲಿದ್ದ ಮಕಾರ ಪದಗಳನ್ನೆಲ್ಲ ಪಟ್ಟಿಮಾಡಿ ಕಂಡುಕೊಂಡು) ಬರೆದು, ತಪ್ಪು ಉತ್ತರ ಒಂದೂ ಬರಲಿಲ್ಲ ಎನ್ನುವುದೂ ದಾಖಲೆ! ಅಲ್ಲಿ ಇನ್ನೊಂದು ಮೋಜಿನ ಪ್ರಸಂಗ ನಡೆಯಿತು. ಬಿಟಿಎಂನಲ್ಲಿ ಬಿ ಎಂದರೆ ಬೈರಸಂದ್ರ ಎಂದಿದ್ದೆ ನಾನು, ಪ್ರಶ್ನೆ ಕೇಳುವಾಗ. ಅದು ತಪ್ಪು, ಬಿ ಎಂದರೆ ಬೊಮ್ಮನಹಳ್ಳಿ ಆಗಬೇಕು ಎಂದು ಬರೆದು ತಿಳಿಸಿದರು ಕೆಲ ಓದುಗರು. ಬನ್ನೇರುಘಟ್ಟ ಎಂದರು ಇನ್ನು ಕೆಲವರು. ನನಗೇ ಕನ್ಫ್ಯೂಷನ್! ಸರಿ, ಬಿಟಿಎಂ ಲೇಔಟ್ನಲ್ಲಿ ಹತ್ತಾರು ವರ್ಷ ನೆಲೆಸಿದ್ದ ನಾಗೇಶ ಹೆಗಡೆ ಅವರನ್ನೇ ಕೇಳೋಣವೆಂದು ಅವರಿಗೆ ಇಮೇಲ್ ಬರೆದೆ. ಬೆಂಗಳೂರಿನಲ್ಲಿರುವ ಇತರ ಸ್ನೇಹಿತರು ಏನಂತಾರೆ ನೋಡೋಣ ಎಂದು ಹಾಲ್ದೊಡ್ಡೇರಿ ಸುಧೀಂದ್ರ, ಡಾ.ಪವನಜ, ಸೂರಿ ಹಾರ್ದಳ್ಳಿ, ಜೋಗಿ, ಶಾಮ್ ಮುಂತಾದವರಿಗೂ ಅದರ ಪ್ರತಿ ಕಳಿಸಿದೆ. ಶುರುವಾಯ್ತು ನೋಡಿ ಇಮೇಲ್ನಲ್ಲೇ ನಮ್ಮ ಚರ್ಚೆ! ನಾನು ವಿಕಿಪೀಡಿಯಾದಲ್ಲಿ ನೋಡಿ ಬೈರಸಂದ್ರ ಎಂದಿದ್ದೆ; ಬೈರಸಂದ್ರವೇ ಸರಿ ಎಂದರು ಸುಧೀಂದ್ರ ಮತ್ತು ಜೋಗಿ. ಅದು ‘ಬಿಳೇಕಹಳ್ಳಿ’ ಆಗಬೇಕೆಂದರು ಪವನಜ, ಒಂದು ಗೂಗಲ್ ಮ್ಯಾಪನ್ನೂ ತೋರಿಸುತ್ತ. ಅದ್ಯಾವುದೂ ಸರಿಯಲ್ಲ ‘ಬೇಗೂರು’ ಎಂದರು ಸೂರಿ. ಬೆಟ್ ಕಟ್ಟುವುದಕ್ಕೂ ಸಿದ್ಧ ಅದು ‘ಬೊಮ್ಮನಹಳ್ಳಿ’ ಎಂದು ನಾ.ಹೆ ಉವಾಚ. ಇದೊಳ್ಳೇ ಕಥೆಯಾಯ್ತಲ್ಲ! ಬಿಟಿಎಂನಲ್ಲಿ ಬಿ ಏನೂಂತ ಖುದ್ದಾಗಿ ಕೆಂಪೇಗೌಡನಿಗೂ ಗೊತ್ತಿಲ್ಲವೇನೊ. ಅಥವಾ, ಶೇಕ್ಸ್ಪಿಯರ್ನಂತೆ ಟು ಬಿ ಆರ್ ನಾಟ್ ಟು ಬಿ ಅಂತ ಡೌಟಿಸುತ್ತಲೇ ಇರಬೇಕೇ?
ಅಷ್ಟೊತ್ತಿಗೆ ನನಗೆ ಬೆಂಗಳೂರಿನ ಜಯನಗರನಿವಾಸಿ ಡಿ.‘ಬಿ’. ಪ್ರಾಣೇಶರಾವ್ ಎಂಬ ಓದುಗಮಿತ್ರರಿಂದ ಇಮೇಲ್ ಬಂತು. ಅದರಲ್ಲಿ ‘ಬಿಟಿಎಂನಲ್ಲಿ ಬಿ ಎಂದರೆ ಬೊಮ್ಮಸಂದ್ರ’ ಅಂತ ಬರೆದಿದ್ದರು. ಅದನ್ನು ಚರ್ಚಾಪಟುಗಳಿಗೆ ತಿಳಿಸಿದೆ. ಏನು ಮಾಯೆಯೋ ಏನೋ ಎಲ್ಲರೂ ಮೌನಸಮ್ಮತಿಯಿತ್ತರು. ವಿವಾದ ಇತ್ಯರ್ಥ ಪುಣ್ಯಫಲದಲ್ಲಿ ಅರ್ಧಭಾಗ ತನಗೂ (‘ಬೊಮ್ಮ’ನಹಳ್ಳಿ ಎಂದದ್ದಕ್ಕೆ), ಉಳಿದರ್ಧ ಭಾಗ ಸುಧೀಂದ್ರಗೂ (ಬೈರ‘ಸಂದ್ರ’ ಎಂದದ್ದಕ್ಕೆ) ಸೇರಬೇಕು ಎಂದು ಷರಾ ಬರೆದರು ನಾಗೇಶ ಹೆಗಡೆ. ಜತೆಯಲ್ಲೇ ‘ಬೊಮ್ಮ ನಿಂಗೆ ಜೋಡುಸ್ತೀವಿ ಸಂದ್ರ ಮುಟ್ಟಿದ ಕೈನ...’ ಅಂತ ಒಂದು ಹೊಸ ರತ್ನನ್ ಪದ. ಇವತ್ತು ಅಂಕಣದ ತಲೆಬರಹವಾಗಿ ಅದು ರಾರಾಜಿಸಿರುವುದರ ಹಿಂದಿನ ಕಥೆ ಇದು. ಈಗ ನನ್ನ ಚಿಂತೆಯೇನೆಂದರೆ ನಾಳೆ ಎಂ.ಜಿ.ರೋಡ್ನ ಅವಸ್ಥೆಯೂ ಹೀಗೇ ಆದರೆ? ಎಂ ಅಂದರೆ ಮಹಾತ್ಮಾ ಅಲ್ಲ ‘ಮೇಡಂ’ ಅಂತ ಯಾರಾದ್ರೂ ಹೇಳಿದ್ರೆ!? ಹೇ ರಾಮ್! ಸಾಕಪ್ಪಾ ಈ ಇನಿಶಿಯಲ್ಸ್ ಸಹವಾಸ.
ಕಳೆದವಾರ ‘ಚೆಲುವಗನ್ನಡದಲ್ಲಿ ಚಿತ್ರಕಾವ್ಯ’ ಕುರಿತು ಬರೆದಿದ್ದೆನಲ್ಲ? ಹಳಗನ್ನಡವಾದ್ದರಿಂದ ಸುಮಾರಷ್ಟು ಓದುಗರಿಗೆ ಅದನ್ನು ಅರ್ಥಮಾಡಿಕೊಂಡು ಆನಂದಿಸುವುದು ಕಷ್ಟವೇ ಆಗಿರಬಹುದು. ಆದರೆ ಅಮೆರಿಕದಲ್ಲಿ ಸಾಫ್ಟ್ವೇರ್ ಎಂಜಿನಿಯರ್ ಆಗಿರುವ ವಿನಾಯಕ ಕುರುವೇರಿ ಎಂಬ ಹುಡುಗನಿಗೆ ಹಾಗಾಗಲಿಲ್ಲ. ವಿಜಯಕರ್ನಾಟಕ ಇ-ಪೇಪರ್ ಆವೃತ್ತಿ ಪ್ರಕಟವಾಗಿ ಒಂದೆರಡು ತಾಸು ಕಳೆದಿಲ್ಲವೇನೊ ಈತ ಒಂದು ಅದ್ಭುತವಾದ ಕವನವನ್ನು ರಚಿಸಿ ನನಗೆ ಇಮೇಲ್ನಲ್ಲಿ ಕಳಿಸಿದ್ದಾನೆ! ಅದೂ ಅಂತಿಂಥ ರಚನೆಯಲ್ಲ, ಚಕ್ರಬಂಧ! ಸಂಸ್ಕೃತದ ಮಾಘಕವಿ ಮತ್ತು ಕನ್ನಡದ ಶ್ರೀಲಿಂಗರಾಜ ಮುಂತಾದವರಿಗೆ ಸೆಡ್ಡುಹೊಡೆದು ನಿಂತಿದ್ದಾನೆ. ಮೊದಲಿಗೆ ಕಳಿಸಿದ್ದರಲ್ಲಿ ಅಕ್ಷರಗಳ ಲೆಕ್ಕಾಚಾರ ಸ್ವಲ್ಪ ತಪ್ಪಿದ್ದರೂ ಅದನ್ನು ತೋರಿಸಿದಾಗ ತತ್ಕ್ಷಣದಲ್ಲೇ ರಿಪೇರಿಮಾಡಿ ಮತ್ತೆ ಕಳಿಸಿದ್ದಾನೆ ಮೇಧಾವಿ! ಕವನವನ್ನು ನೀವೂ ಒಮ್ಮೆ ಓದಿ:
ಸಾಮವಿದುವೇ ಶಕ್ರನುಡಿ ಮಧುಭಾಮಿನೀ ಚಿತ್ತಕಮಗ
ಕಾವ್ಯನಾಗರಿ ಸಂಬಂಧಸುಮಗಂಧದಂಕಿತದೂಂಕು ಮೋದ
ಬಾಳಿಯದರಲಿ ಧರಣಿಮಣಿ ನುಡಿಚಂಚಲರುರ್ಕನು
ನುಸಿದು ಸಾವಿರ ಕಾಲಕು ಬಾಳಲಿಂಗನ್ನಡದ ಹಾಲ್ಜೇನು.
ಸರಳಗನ್ನಡದಲ್ಲಿ ಇದರ ಅರ್ಥ- “ಮಧು ಭಾಮಿನಿಯಂತಿರುವ, ಚಿತ್ತಕ್ಕೆ ಸಂಭ್ರಮ(ಅಮಗ) ಕೊಡುವ, ದೇವರ ನುಡಿಯಾದ(ಶಕ್ರನುಡಿ) ಇದುವೇ(ಕನ್ನಡವೇ) ನಮಗೆ ಸಾಮ(ಗುನುಗುನಿಸಲಾಗುವ ಸರಳ ವೇದ). ಸಂಸ್ಕೃತವು ದೇವನಾಗರಿ(ದೇವರ ನಗರಕ್ಕೆ ಸೀಮಿತವಾದದ್ದು) ಆದರೆ ನಮ್ಮದು ಅತ್ಯುಚ್ಚ ಕವಿಪರಂಪರೆ ಹೊಂದಿರುವ (‘ಏಳು ಜ್ಞಾನಪೀಠಗಳನ್ನು ಪಡೆದ’ ಎಂಬ ಕ್ಲೀಷೆಯ ಮಾತನ್ನೂ ಕಾಲರ್ ಎತ್ತಿ ಹೇಳೋಣವಂತೆ) ಕಾವ್ಯನಾಗರಿ. ಸಂಬಂಧಗಳೆಂಬ ಹೂವಿನ ಗಂಧ ಮೆತ್ತಿಕೊಂಡಿರುವ ಈ ಕನ್ನಡದ ಧ್ಯಾನವು(ಊಂಕು) ನಮಗೆ ಮೋದ(ಸಂತೋಷಕರ). ನುಡಿಚಂಚಲರ(ಕನ್ನಡಿಗರಾಗಿದ್ದೂ ಕನ್ನಡ ಮಾತಾಡದೆ, ಬಾರದ ಭಾಷೆಯ ಬಡಬಡಾಯಿಸುವವರ) ಜಂಭವನ್ನು(ಉರ್ಕನ್ನು) ತೂತುಮಾಡಿ(ನುಸಿದು), ಭೂಮಿಗೆ ಮಣಿಯಂತಿರುವ(ಧರಣಿಮಣಿ) ಇಂಪು ಕನ್ನಡದ(ಇಂಗನ್ನಡದ) ಹಾಲ್ಜೇನು ಸಾವಿರ ಕಾಲಕ್ಕೂ ಬಾಳಲಿ.”
ಆಹಾ! ಎಂಥ ಸುಂದರ ಚಿಂತನೆ, ಎಷ್ಟು ಸೊಗಸಾದ ಬಣ್ಣನೆ! ಇದೊಂದು ಚಕ್ರಬಂಧ ರಚನೆ ಎಂದೆನಲ್ಲಾ, ಚಕ್ರದ ಒಳಚಕ್ರಗಳಲ್ಲಿ ಪ್ರದಕ್ಷಿಣಾಕಾರ ಸುರುಳಿಯಲ್ಲಿ ‘ವಿನಾಯಕ ಕುರುವೇರಿ ರಚಿತ ಚಕ್ರಬಂಧಮಿದಂಡಿ’ ಎಂಬ ೧೮ ಅಕ್ಷರಗಳ ವಾಕ್ಯ ಗೋಚರಿಸುತ್ತದೆ. ಇದೊಂದು ಭಾಷಾಚಿತ್ರ ಕೂಡ! ತ್ರಿಭಾಷಾ ಸಂಗಮ. ‘ವಿನಾಯಕ ಕುರುವೇರಿ ರಚಿತ ಚಕ್ರಬಂಧ’ ಎಂಬಲ್ಲಿಗೇ ನಿಲ್ಲಿಸಿದರೆ ಕನ್ನಡದ ವಾಕ್ಯ. ‘ಚಕ್ರಬಂಧಮಿದಂ’ ಎಂದರೆ ಸಂಸ್ಕೃತವಾಗುತ್ತದೆ. ‘ಚಕ್ರಬಂಧಮಿದಂಡಿ’ ಎಂದು ಓದಿದರೆ ಗೌರವದಿಂದ ತೆಲುಗಿನಲ್ಲಿ ಹೇಳಿದಂತಾಗುತ್ತದೆ! ಮಂಗಳೂರಿನ ಹುಡುಗ ವಿನಾಯಕ ಕುರುವೇರಿ ( vinayak dot kuruveri at gmail dot com ) , ಮೈಸೂರಲ್ಲಿ ಎಂಜಿನಿಯರಿಂಗ್ ಓದಿ, ಸ್ವಂತ ಇಚ್ಛೆಯಿಂದ ಕನ್ನಡ ಎಂ.ಎ ಕೂಡ ಮಾಡಿ, ಈಗ ಇನ್ಫೊಸಿಸ್ನಲ್ಲಿ ಉದ್ಯೋಗಿಯಾಗಿರುವ ಪ್ರತಿಭಾವಂತ. ದಯವಿಟ್ಟು ನೀವು ಒಮ್ಮೆ ಪೇಪರ್ ಕೆಳಗಿಟ್ಟು ಜೋರಾಗಿ ಚಪ್ಪಾಳೆತಟ್ಟಿ ಕುರುವೇರಿಯ ಕಾವ್ಯಶಕ್ತಿಯನ್ನು ಕೊಂಡಾಡಿ. (ಕೆಲವು ‘ಎಂಸಿ’ಗಳಿಗೆ ಅದೊಂದು ಚಟ, ಪ್ರೇಕ್ಷಕರಿಂದ ಪದೇಪದೆ ಚಪ್ಪಾಳೆ ಡಿಮ್ಯಾಂಡ್ ಮಾಡೋದು. ಹಾಗೆ ಮಾಡಿದೆನೇ ಇಲ್ಲಿ ನಾನೂ?)
ಇನ್ನು, ಪರಾಗಸ್ಪರ್ಶದ ಈವರ್ಷದ ವಿವಿಧ ಲೇಖನಗಳಲ್ಲಿ ನುಸುಳಿದ್ದ ಕೆಲ ತಪ್ಪುಗಳು, ಅರೆಮಾಹಿತಿ, ಮತ್ತು ತಿದ್ದುಪಡಿಗಳು ಹೀಗಿವೆ. ‘ಅನುರಾಗದ ರಂಧನ...’ (ಜ.೧೦) ಲೇಖನದಲ್ಲಿ ಕುಂತಿ ಪಂಚಪಾಂಡವರಿಗೆ ಭಿಕ್ಷಾನ್ನ ಹಂಚಿಕೊಡುತ್ತಿದ್ದದ್ದು ವಿರಾಟ್ಪರ್ವದಲ್ಲಿ ಅಂತಿತ್ತು. ಅದು ಆದಿಪರ್ವದಲ್ಲಿ ಆಗಬೇಕು. ‘ಅಂಧಕಾರದ ಅಚ್ಚರಿ...’ (ಏ.೨೫)ಯಲ್ಲಿ ಕತ್ತಲೆಯ ಭಯ ಕ್ಲೌಸ್ಟ್ರೊಫೊಬಿಯಾ ಅಂತಿತ್ತು. ಅದು ನಿಕ್ಟೊಫೊಬಿಯಾ ಅಥವಾ ಲಿಗೊಫೊಬಿಯಾ ಆಗಬೇಕು. ಕ್ಲೌಸ್ಟ್ರೊಫೊಬಿಯಾ ಎಂದರೆ ಇಕ್ಕಟ್ಟಿನ ಸ್ಥಳಗಳ ಹೆದರಿಕೆ. ‘ಕಟಪಯ ಸೂತ್ರ’ದಲ್ಲಿ (ಆ.೮) ಸಂಯುಕ್ತಾಕ್ಷರದಲ್ಲಿ ಎರಡನೆಯ ವ್ಯಂಜನ (ಷ‘ಣ್ಮು’ಖದಲ್ಲಿ ಣ ಅಲ್ಲ ಮ)ಪರಿಗಣಿಸಬೇಕು ಅಂತಿತ್ತು. ನಿಜ, ಆದರೆ ಆ ಎರಡನೇ ವ್ಯಂಜನವು ‘ಯ’ವರ್ಗದಲ್ಲಿದ್ದರೆ (ಅಂದರೆ ಯ, ರ, ಲ, ವ, ಶ, ಷ, ಸ, ಹ ಪೈಕಿ ಆಗಿದ್ದರೆ) ಆಗ ಮೊದಲನೇ ವ್ಯಂಜನವನ್ನೇ (ಚ‘ಕ್ರ’ವಾಕದಲ್ಲಿ ರ ಅಲ್ಲ ಕ) ತೆಗೆದುಕೊಳ್ಳಬೇಕು. ‘ಉಪ್ಪು...’ ಹರಟೆಯಲ್ಲಿ (ಆ.೧೫) ಬೆಂಗಳೂರಿನ ಉಪ್ಪಾರಪೇಟೆಯ ಉಲ್ಲೇಖ ಬೇಡಾಗಿತ್ತು. ಅದಕ್ಕೂ ಉಪ್ಪಿಗೂ ಏನೂ ಸಂಬಂಧವಿಲ್ಲ. ‘ವಿಮಾನ ಎಳೆಯಿರಿ...’ (ಸೆ.೨೬)ದಲ್ಲಿ ‘ದೈಹಿಕ, ಮಾನಸಿಕ ನ್ಯೂನತೆಗಳುಳ್ಳ ಕ್ರೀಡಾಳುಗಳಿಗೋಸ್ಕರ ಸ್ಪೆಷಲ್ ಒಲಿಂಪಿಕ್ಸ್’ ಅಂತಿತ್ತು. ದೈಹಿಕ ನ್ಯೂನತೆಯುಳ್ಳವರಿಗೋಸ್ಕರ ನಡೆಯುವುದು ‘ಪಾರಾಲಿಂಪಿಕ್ಸ್’; ಮಾನಸಿಕ ಅಸ್ವಸ್ಥರಿಗಾಗಿ ನಡೆಯುವುದು ಸ್ಪೆಷಲ್ ಒಲಿಂಪಿಕ್ಸ್. ‘ಬಟ್ಟೆ ಒಗೆಯುವ ಸೊಬಗು...’ (ಡಿ.೧೨)ದಲ್ಲಿ ಆಂಡ್ರೆ ಅಗಾಸಿ ಅಮೆರಿಕದ ಖ್ಯಾತ ಟೆನ್ನಿಸ್ ಆಟಗಾರ್ತಿ ಅಂತಿತ್ತು. ಆಟಗಾರ ಎಂದಾಗಬೇಕು. ತಪ್ಪುಗಳನ್ನು ಹುಡುಕಿಕೊಟ್ಟವರಿಗೆ, ತಿದ್ದುಪಡಿಗಳನ್ನು ಸೂಚಿಸಿದವರಿಗೆ ಧನ್ಯವಾದಗಳು.
ಅಂಕಣಕ್ಕೆ ಪ್ರತಿಕ್ರಿಯೆಯಾಗಿ ಬರುವ ಓಲೆಗಳಲ್ಲಿ ‘ಲೇಖನ ಚೆನ್ನಾಗಿತ್ತು...’ ಎಂಬ ಧಾಟಿಯವು ಬಹಳಷ್ಟಿರುತ್ತವೆ, ಒಳ್ಳೆಯದೇ. ಆದರೆ ಅದಕ್ಕಿಂತ ಮಿಗಿಲಾದ ಖುಶಿಯಂಶಗಳೂ ಆ ಪತ್ರಗಳಲ್ಲಿರುತ್ತವೆ. ಮೂರ್ನಾಲ್ಕು ಸಾಲುಗಳೇ ಆದರೂ ಅವು ಜೀವಂತಿಕೆ-ಜೀವನಪ್ರೀತಿಯ ಸೆಲೆಗಳಾಗಿರುತ್ತವೆ. ಅವು ಕಣ್ಮುಂದೆ ತರುವ ಚಿತ್ರಣಗಳು ಚಂದವಿರುತ್ತವೆ. ಒಂಥರ ರೀಡರ್ಸ್ ಡೈಜೆಸ್ಟ್ನ Life's like that ಅಂಕಣದ, ಕಸ್ತೂರಿಯ ‘ಇದುವೇ ಜೀವ ಇದು ಜೀವನ’ ಅಂಕಣದ ಛಾಯೆ ಆ ಪುಟ್ಟ ಬರಹಗಳಲ್ಲಿರುತ್ತದೆ. ಪಲ್ಸ್ ತಿಳಿಯಲು ಕೆಲವು ಸ್ಯಾಂಪಲ್ಸ್- ಗಸಗಸೆ ತಿಂದು ಅಮಲೇರಿ ಪೇಚಾಡಿದ ಸ್ವಾನುಭವ ಕಥನ (ಮೈಸೂರಿನಿಂದ ರೇಖಾ ಮೂಡಬಿದ್ರಿ), ಡ್ಯಾಶ್ಬೋರ್ಡ್ ಗಣಪನಿಗೆ ಲಂಚದ ಆಮಿಷ ತೋರಿಸಿ ಪೂಜೆ ಸಲ್ಲಿಸುವ ತನ್ನ ವಾರಗಿತ್ತಿಯ ವೈಖರಿ (ಧಾರವಾಡದಿಂದ ಗೌರಿ ಹಿರೇಮಠ), ಮಾಲ್ಗಳಿಗಿಂತ ತಳ್ಳುಗಾಡಿಯವನಿಂದಲೇ ಹಣ್ಣು-ತರಕಾರಿ ಕೊಳ್ಳುವುದರಲ್ಲಿನ ಮಾನವೀಯ ಅಂಶಗಳ ಬಣ್ಣನೆ (ಬೆಂಗಳೂರಿನಿಂದ ಜಯಶ್ರೀ ಟಿ ಎಸ್), ಅಮೆರಿಕದ ಸ್ಕೂಲ್ನಲ್ಲಿ ಪೇರೆಂಟ್ಸ್ ಮೀಟಿಂಗ್ನಲ್ಲಿ ಉದ್ದಿನವಡೆ ಹಂಚಿ ಮಿಂಚಿದ ಅನುಭವ (ಫ್ಲೋರಿಡಾದಿಂದ ಆಶಾ ಶೆಟ್ಟಿ), ಬಾಲ್ಕನಿಯಲ್ಲಿಟ್ಟ ಕಣಗಿಲೆ ಹೂವಿನ ಗಿಡಕ್ಕೆ ಬರುವ ಪುಟ್ಟ ನೀಲಿ ಹಕ್ಕಿಯ ಚಿಲಿಪಿಲಿ ಸೊಬಗು (ಹೈದರಾಬಾದ್ನಿಂದ ಭಾಗ್ಯ ಸುಭಾಶ್), ವಿದ್ಯುತ್ ತಂತಿಗೆ ಸಿಕ್ಕಿಬಿದ್ದು ವಿಲವಿಲ ಒದ್ದಾಡಿದ ಹಕ್ಕಿಯನ್ನು ಬದುಕಿಸಲಾಗದ ಬೇಸರ (ಉಡುಪಿಯಿಂದ ನೀರಜಾ ಹೊಳ್ಳ), ‘ಉಪ್ಪಿನ ಕುರಿತು ತಪ್ಪದೇ ಓದಿ ಒಪ್ಪವಾದ ಉತ್ತರ ಕೊಡದಿದ್ದರೆ ಪರಮಾತ್ಮ ಒ(ಅ)ಪ್ಪುವನೇ?’ ಎಂಬಂಥ ಶಬ್ದಸರಸ (ಶಿಕಾಗೊದಿಂದ ಅನುಪಮಾ ಮಂಗಳವೇಢೆ), ‘ಚಂದಮಾಮ ಹಳೇಸಂಚಿಕೆಗಳನ್ನು ಕಂಪ್ಯೂಟರ್ ಪರದೆಯ ಮೇಲೆ ನೋಡಿ ನಾನು ದಳದಳಾಂತ ಕಣ್ಣೀರು ಸುರಿಸಿದೆ’ ಎಂಬ ನಿ‘ವೇದನೆ’ (ಕ್ಯಾಲಿಫೋರ್ನಿಯಾದಿಂದ ಸರಸ್ವತಿ ವಟ್ಟಮ್), ‘ಪಾನಕದ ಲೋಟ ಟೀಪಾಯ್ ಮೇಲೆ ಇಡುತ್ತಿದ್ದೇನೆ ಅಂತ ಇಟ್ಟರೆ, ಅದು ತಪ್ಪಿ ಕೆಳಗೆ ಬಿದ್ದು ಅದರಲ್ಲಿದ್ದ ಪಾನಕದ ಹನಿಗಳು ರಕ್ತ ಬೀಜಾಸುರನ ವಂಶದವರಂತೆ ಸಾವಿರ ಹನಿಗಳಾಗಿ ಸಿಡಿದು ನೆಲದ ಮೇಲೆ ಮಾತ್ರವಲ್ಲದೆ ಹತ್ತಿರವಿದ್ದ ಕುರ್ಚಿ, ಪುಸ್ತಕ, ಒಳಗಿಡಬೇಕೆಂದು ಮಡಚಿ ಇಟ್ಟಿದ್ದ ಬಟ್ಟೆ, ಇನ್ನೂ ಎಲ್ಲಾ ಕಡೆ ತಾಗಿ... ಅಬ್ಬಬ್ಬಾ ಇದೆಲ್ಲ ಮರ್ಫಿ ಮಹಾನುಭಾವನದೇ ಕಾರ್ಬಾರು, ನನ್ನ ತಪ್ಪಿಲ್ಲ’ ಎಂಬ ನಿಟ್ಟುಸಿರು (ಮಂಗಳೂರಿನಿಂದ ಅನಿತಾ ನರೇಶ್), ‘ಬದನೆಜಡೆ ಕಟ್ಟಿ ಹಳದಿ ಫ್ರಾಕ್ ತೊಟ್ಟು ಪುಷ್ಪಳೊಡನೆ ಸೈಕಲ್ ಕಲಿತ, ಅಥವಾ, ಪಪ್ಪನ ನೇಣು ಪಿಡಿದು ಮಾರ್ಕೆಟ್ಟಿನ ಮುಂಭಾಗದಲ್ಲಿ ಅದುಬೇಕು ಇದುಬೇಕು ಎಂದು ಪೀಡಿಸಿದ ಕ್ಷಣಗಳ ಬಾಲ್ಯ ಮರಳಿ ಸಿಗಲಿ’ ಎಂಬ ತಹತಹ (ಬೆಂಗಳೂರಿನಿಂದ ಅಂಜಲಿ ರಾಮಣ್ಣ), ‘ಬೆಣ್ಣಿಹಳ್ಳದಾಗ ಬಟ್ಟಿ ಒಗದದ್ದು ನೆನ್ಪಾತು. ಅಲ್ಲಿ ಒಂದ ಮಜಾ ಅಂದ್ರ ಆ ಹಳ್ಳ ಊರಿಗ ಭಾಳ ಸಮೀಪ ಇತ್ತು. ಭಾಳ ಮಂದಿ ಬಟ್ಟಿ ಒಗ್ಯಾಕ ಬರ್ತಿದ್ರು. ಹಂಗಾಗಿ ಒಗೆಯುವ ಕಲ್ಲಿಗೆ ಪಾಳಿ ಇರ್ತಿತ್ತು. ಅದಕ್ಕ ನಾವು ಸಣ್ಣ ಒಗಿಯುವ ಕಲ್ಲನ್ನ ತಲೀಮ್ಯಾಲೆ ಹೊತಗೊಂಡು ಹೋಗಿ ಬಟ್ಟಿ ಒಕ್ಕೊಂಡು ಬರ್ತಿದ್ದೆವು...’ ಎಂಬ ಒದ್ದೆ ನೆನಪು (ಮಂಗಳೂರಿನಿಂದ ವಿಜಯಲಕ್ಷ್ಮೀ ಜಾಬಿ), ‘ಬಾಳಿನ ಸತ್ಯವ ಸಾರುವ ತತ್ತ್ವವ ಅನುದಿನ ನೀ ತಿಳಿ ನೀತಿಯಲಿ; ಸಕಲಾಭರಣದ ತೇಜವ ತರುವುದು ಉತ್ತಮ ನಡೆನುಡಿ ಬಾಳಿನಲಿ’ ಎಂಬ ಕಗ್ಗದಂಥ ಹಿತವಚನ (ನಾರ್ತ್ ಕೆರೊಲಿನಾದಿಂದ ಸವಿತಾ ರವಿಶಂಕರ್)- ಒಂದೊಂದೂ ಪತ್ರವೂ ಹೃದಯಸ್ಪರ್ಶಿ. ಥ್ಯಾಂಕ್ಯೂ ವೆರಿ ಮಚ್!
ಇದು, ಎರಡುಸಾವಿರದ ಹತ್ತು ಹೊರಳುವ ಹೊತ್ತು ಸ್ನೇಹದ ಚಿಪ್ಪಿನಲ್ಲರಳಿದ ಸ್ವಾತಿಮುತ್ತು. ಮುಂದೆ ಎರಡು ಸಾವಿರದ ಹನ್ನೊಂದು- ಶುರುವಾಗಲಿ ಅಕ್ಷರಸ್ನೇಹಗಾಥೆಯ ಅಧ್ಯಾಯ ಇನ್ನೊಂದು!
========
ಈ ಲೇಖನವನ್ನು ವಿಜಯ ಕರ್ನಾಟಕ ಇ-ಪೇಪರ್ನಲ್ಲಿ ನೀವು ಇಲ್ಲಿ ಓದಬಹುದು.
"Listen Now" ಮೇಲೆ ಕ್ಲಿಕ್ಕಿಸಿದರೆ ಕೇಳಿ ಆನಂದಿಸಬಹುದು!
view more